ನಿನ್ನದೇ ಹೆಸರು ನಿನಗೆ ತಿಳಿಯದೆ

ಗಾಡಿ ಬಂದ ಸದ್ದಿಗೆ ಹೊರಗಿಣುಕಿದೆ
ಅತ್ತೆ ಇಳಿಯುತ್ತಿದ್ದಳು ಮೊದಲು
ನೂರೆಂಟು ಚೀಲ ಪೆಟ್ಟಿಗೆಗಳು ಹಿಂದೆ
ಅನಂತರ ಇಳಿದವಳು ಅತ್ತೆ ಮಗಳು

ಚಡ್ಡಿ ಚೋಟು ಲಂಗದ ವಯಸೇ ಕೊನೆ
ಅಂದಿನಿಂದೀಚೆಗೆ ನೋಡಿದ್ದೇ ಇಲ್ಲ
ಬೇಲಿ, ಬಾವಿ ತಿರುಗಿದ್ದುದು ಒಂದೇ ಸಮನೆ
ಅವಳಿಗೆ ನೆನಪಿರಲಿಕ್ಕಿಲ್ಲ

ಒಳಗಡಿಯಿಟ್ಟ ಅತ್ತೆ ಕೈ ತೋರಿದಳು
"ಇವನಾರು ಗುರುತಾಯಿತೇನೆ"

ತಡವರಿಸಿ ಹೇಳಲು ಮೊದಲು
ನಕ್ಕು ನುಡಿದೆ "ನಾನು ನಾನೆ"

ಭಯವೋ ಬಿಗುಮಾನವೋ
ಸಂಕೋಚವೋ ಕಾಣೆ
ಯಾವಾಗಲಾದರೂ ಸರಿ ಮೌನ ಮೌನ,
ಮೌನದೊಳಗೇ ಮಾತನಾಡುವ ಜಾಣೆ
ಮೂಕ ಭಾಷೆಯಲ್ಲೊಂದೆನೋ
ಅನುಮಾನ


ಏನೋ ಕಾರಣಕೆ ಮಾತು ಬೆಳೆದು ಬಿದ್ದಿತ್ತು
ಅಪ್ಪ ಅತ್ತೆಯರ ನಡುವೆ ಬೇಲಿ
ಹತ್ತಾರು ವರ್ಷದ ಮೇಲೆ ವೈಮನಸ್ಯ ಕಳೆದು
ತಿಳಿಯಾಗಿದೆ ಮನಸು ಈ ಬೇಲಿ ತೇಲಿ

ಹೆಣ್ಣು ದಿಕ್ಕಿರದ ಮನೆಯೊಳಗೆ
ಗೌರಿ ಹಬ್ಬ ಅದೆಂಥ ಚೆಂದ?
ಆದರೀ ವರ್ಷದ ಹುಣ್ಣಿಮೆಗೆ
ಸಡಗರ ಅವಳಿರುವುದರಿಂದ

ಮುದುಕಿಯ ಕೆಣಕಾಟ ಎದುರು ಬಾಗಿಲಲಿ
"ಹೆಸರು ಹೇಳದೇ ಒಳಗಡಿಯ ಇಡದಿರು"
ಆರತಿಯ ಹುಡುಗಿ ಹೇಳಿದಳು ನಾಚಿಕೆಯಲಿ
ತನ್ನ ಗಂಡನಾಗುವವನ ಹೆಸರು

ಈಗ ನನ್ನ ಸರದಿ, ಎದುರಿನಲಿ ನನ್ನ ಹುಡುಗಿ
ಕೈಯೊಳಗೆ ಆರತಿಯ ತಟ್ಟೆ
ಬಾಗಿಲಲಿ ತಡೆದರೆ ಪ್ರಶ್ನಿಸಿದಳು ಮೆದುವಾಗಿ
"ಏನು? ಕೈ ಏಕೆ ಅಡ್ಡ ಇಟ್ಟೆ?"

"ಅತ್ತೆಯ ಮಗಳೆ, ದಾಟದಿರು ಹೊಸಿಲು
ಬಿಡಲಾರೆ ಒಳಗೆ ಹೆಸರ ಹೇಳದೇ"
ಕಣ್ಣು ಮಿಟುಕಿಸಿಯವಳು ಹೇಳಿದ್ದೊಂದೇ ಸಾಲು
"ನಿನ್ನದೇ ಹೆಸರು ನಿನಗೆ ತಿಳಿಯದೆ."

            - ಚಿದಾನಂದಯ್ಯ ಏನ್.ಎಂ.

ಮಲೆಗಳಲ್ಲಿ ಮದುಮಗಳು

ಇಲ್ಲಿ
ಯಾರೂ ಮುಖ್ಯರಲ್ಲ
ಯಾರೂ ಅಮುಖ್ಯರಲ್ಲ
ಯಾವುದೂ ಯ:ಕಶ್ಚಿತವಲ್ಲ!

ಇಲ್ಲಿ
ಯಾವುದಕ್ಕೂ ಮೊದಲಿಲ್ಲ
ಯಾವುದಕ್ಕೂ ತುದಿಯಿಲ್ಲ
ಯಾವುದೂ ಎಲ್ಲಿಯೂ ನಿಲ್ಲುವುದು ಇಲ್ಲ
ಕೊನೆ ಮುಟ್ಟುವುದು ಇಲ್ಲ

ಇಲ್ಲಿ
ಅವಸರವೂ ಸಾವಧಾನದ ಬೆನ್ನೇರಿದೆ!

ಇಲ್ಲಿ
ಎಲ್ಲಕ್ಕೂ  ಇದೆ ಅರ್ಥ
ಯಾವುದೂ ಅಲ್ಲ ವ್ಯರ್ಥ
ನೀರೆಲ್ಲವೂ ತೀರ್ಥ!

        - ಕವಿ ಕುವೆಂಪು ತಮ್ಮ 'ಮಲೆಗಳಲ್ಲಿ ಮದುಮಗಳು' ಕಾದಂಬರಿಯಲ್ಲಿ ಓದುಗರಿಗೆ ಹೇಳಿದ ಈ ಮಾತು, ನಾಟಕಕ್ಕೂ ಅನ್ವರ್ಥ.

ಒಂದು ಸತ್ಯ

ಅಭಿವೃದ್ಧಿ ಯೋಜನೆಗೆ ಹಳ್ಳಿಗರ ತ್ಯಾಗ
ಪಟ್ಟಣದ ಜನಗಳಿಗೆ ಫಲದ ಬಹು ಭಾಗ
ಈ ವ್ಯಥೆಯ ಕಥೆಗುಂಟು ಬಗೆಬಗೆಯ ಬಣ್ಣ
ಒಂದು ಕಣ್ಣಿಗೆ ಬೆಣ್ಣೆ, ಒಂದಕ್ಕೆ ಸುಣ್ಣ...
                     - ಪಳಕಳ ಸೀತಾರಾಮ ಭಟ್ಟ

ರೈತ

ಕೃತಕ ಮಳೆಯ
ಮೊದಲ ಹನಿ
ಬಿತ್ತು,
ನೇಣು ಹಾಕಿಕೊಂಡ
ರೈತನ ಹಗ್ಗದ
ಮೇಲೆ.
  --- ವಿ.ಪುಗಳೆಂದಿ

Search all your queries

Custom Search
 
Copyright 2009 ಕನ್ನಡ ಕಾವ್ಯ. Powered by Blogger Blogger Templates create by Deluxe Templates. WP by Masterplan